ಜಮಖಂಡಿ
ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಒಂದು ಉಪ ವಿಭಾಗ; ತಾಲ್ಲೂಕು; ಆ ತಾಲ್ಲೂಕಿನ ಆಡಳಿತಕೇಂದ್ರ. ಜಮಖಂಡಿ ಉಪವಿಭಾಗದಲ್ಲಿ ಮುಧೋಳ, ಜಮಖಂಡಿ ಮತ್ತು ಬೀಳಗಿ ತಾಲ್ಲೂಕುಗಳಿವೆ. ಬೆಳಗಾಂವಿ ಜಿಲ್ಲೆಯ ರಾಯಬಾಗ್ ಮತ್ತು ಅಥಣಿ ತಾಲ್ಲೂಕುಗಳೂ ಬಿಜಾಪುರ ಜಿಲ್ಲೆಯ ಬಿಜಾಪುರ, ಬೀಳಗಿ ಮತ್ತು ಮುಧೋಳ ತಾಲ್ಲೂಕುಗಳೂ ಜಮಖಂಡಿ ತಾಲ್ಲೂಕನ್ನು ಬಳಸಿವೆ. ಜಮಖಂಡಿ ತಾಲ್ಲೂಕಿನ ವಿಸ್ತೀರ್ಣ 448.3 ಚ.ಮೈ. (1,161 ಚ.ಕಿಮೀ.) ಜನಸಂಖ್ಯೆ 4,08,436 (2001). ತಾಲ್ಲೂಕಿನಲ್ಲಿರುವ ರೆವಿನ್ಯೂ ವಲಯಗಳು ಜಮಖಂಡಿ, ಸಾವಳಗಿ ಮತ್ತು ತೇರದಾಳ. ತಾಲ್ಲೂಕಿನಲ್ಲಿ ಒಟ್ಟು 65 ಹಳ್ಳಿಗಳಿವೆ.

	ತಾಲ್ಲೂಕಿನ ಎರೆಮಣ್ಣಿನ ಭೂಮಿಗಳಲ್ಲಿ ಗೋದಿ ಮತ್ತು ಹತ್ತಿ ಬೆಳೆಯುತ್ತವೆ. ಕೃಷ್ಣಾ ನದಿಯ ಎರಡೂ ದಂಡೆಯ ಮೈದಾನಗಳಲ್ಲಿ ಈ ಬೆಳೆಗಳನ್ನು ವಿಪುಲವಾಗಿ ಬೆಳೆಯುತ್ತಾರೆ. ಸುಣ್ಣದ ಕಲ್ಲಿನ ಗಣಿಗಳೂ ತಾಲ್ಲೂಕಿನಲ್ಲಿ ಹೇರಳವಾಗಿ ಉಂಟು. ಮನೆಮನೆಯಲ್ಲಿ ಕೈಮಗ್ಗದ ಬಟ್ಟೆಗಳು ತಯಾರಾಗುತ್ತವೆ. ಇಲ್ಲಿಯ ಕೈಮಗ್ಗದ ಬಟ್ಟೆಗಳಿಗೆ ಸಾಕಷ್ಟು ಬೇಡಿಕೆ ಉಂಟು.

	1948ಕ್ಕೆ ಮೊದಲು ಜಮಖಂಡಿ ಒಂದು ಚಿಕ್ಕ ಸಂಸ್ಥಾನವಾಗಿತ್ತು. ಪಟವರ್ಧನಿ ಸಂಸ್ಥಾನವೆಂದು ಇದನ್ನು ಕರೆಯಲಾಗುತ್ತಿತ್ತು. ಹರಭಟ್ಟನೆಂಬವನು ಈ ಸಂಸ್ಥಾನದ ಮೂಲಪುರುಷ. ಇವನು ಬಾಳಾಜಿ ವಿಶ್ವನಾಥನ ಜೊತೆಗೆ ಇಲ್ಲಿಗೆ ಬಂದು ಈ ಸಂಸ್ಥಾನವನ್ನು ಸ್ಥಾಪಿಸಿದ. 1821ರಲ್ಲಿ ಬ್ರಿಟಿಷರೊಡನೆ ಆದ ಸಂಧಿಗೆ ಅನುಗುಣವಾಗಿ ಈ ಸಂಸ್ಥಾನಿಕರಲ್ಲಿ ಒಬ್ಬನಾಗಿದ್ದ ಪರಶುರಾಮ ಭಾವು ವಿದ್ವಾಂಸ. ಇವನ ಕಾಲದಲ್ಲಿ ಜಮಖಂಡಿ ಸಂಸ್ಥಾನ ಅತ್ಯುನ್ನತ ಶಿಖರ ಮುಟ್ಟಿತ್ತು. 1948ರಲ್ಲಿ ಈ ಸಂಸ್ಥಾನ ಮುಂಬಯಿ ರಾಜ್ಯದಲ್ಲಿ ವಿಲೀನವಾಯಿತು.

	ಜಮಖಂಡಿ ಉಪವಿಭಾಗ ಮತ್ತು ತಾಲ್ಲೂಕಿನ ಆಡಳಿತಕೇಂದ್ರ ಜಮಖಂಡಿ. ಕುಡಚಿ ರೈಲ್ವೆ ನಿಲ್ದಾಣದಿಂದ 34ಮೈ. ದೂರದಲ್ಲಿ, ಬಿಜಾಪುರದ ನೈಋತ್ಯಕ್ಕೆ 35 ಮೈ. ದೂರದಲ್ಲಿ ಇದೆ. ಜನಸಂಖ್ಯೆ 57,887 (2001). ಪಟ್ಟಣದ ಆಡಳಿತಕ್ಕೆ ಒಂದು ಪೌರಸಭೆ ಉಂಟು. ಬಳಿಯ ಬೆಟ್ಟದ ಮೇಲೆ ನಿರ್ಮಿಸಲಾದ ಜಲಾಶಯದಿಂದ ಪಟ್ಟಣಕ್ಕೆ ನೀರು ಸರಬರಾಯಿ ಆಗುತ್ತಿದೆ. ಇಲ್ಲಿ ವರ್ಷಕ್ಕೊಮ್ಮೆ ಏಪ್ರಿಲ್‍ನಲ್ಲಿ ದನಗಳ ಜಾತ್ರೆ ಸೇರುತ್ತದೆ. ಆ ಸಮಯದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ದನಗಳು ಸೇರುತ್ತವೆ. ಜಮಖಂಡಿಯಲ್ಲಿ ಅನೇಕ ದೇವಾಲಯಗಳುಂಟು. ಮುಖ್ಯವಾದವು ನಾಲ್ಕು : ಉಮಾರಾಮೇಶ್ವರ, ಜಂಬುಕೇಶ್ವರ, ಕಲ್ಮೇಶ್ವರ ಮತ್ತು ಬಸವಣ್ಣ. ಪಟ್ಟಣದ ಹೊರಗೂ ಅನೇಕ ಪ್ರಖ್ಯಾತ ದೇವಾಲಯಗಳುಂಟು. ಜಮಖಂಡಿಯಲ್ಲಿ ಮುಸ್ಲಿಮರ ಒಂದು ಪ್ರಾಚೀನ ದರ್ಗಾ ಇದೆ. ಜಮಖಂಡಿಯಿಂದ ಸುಮಾರು 3ಮೈ.ದೂರದಲ್ಲಿ ಇರುವ ಒಂದು ಸುಂದರ ದೇವಾಲಯ ಎಲ್ಲಮ್ಮನದು. ವೆಂಕಟರಮಣನ ಗುಡಿಯೊಂದು ಜಮಖಂಡಿಯಿಂದ ಸುಮಾರು 6 ಮೈ. ಮೇಲಿದೆ. ಪಟ್ಟಣದಲ್ಲಿ ಅನೇಕ ಸುಂದರ ಕಟ್ಟಡಗಳುಂಟು. ದರ್ಬಾರ್ ಭವನ ಈಗ ಕಾಲೇಜೊಂದರ ಸಭಾಭವನ. ರಾಮನಿವಾಸ ಎಂಬ ಸುಂದರ ವಿಶ್ರಾಂತಿ ಮಂದಿರ ಒಂದು ಗುಡ್ಡದ ಮೇಲುಂಟು.

	ಜಮಖಂಡಿ ಒಂದು ವ್ಯಾಪಾರ ಕೇಂದ್ರ. ಸಹಕಾರ ಬ್ಯಾಂಕೂ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘವೂ ನಿಯಂತ್ರಿತ ಮಾರುಕಟ್ಟೆಯೂ ಇವೆ. ಇಲ್ಲೊಂದು ಕೈಗಾರಿಕಾ ಕ್ಷೇತ್ರವುಂಟು (ಇಂಡಸ್ಟ್ರಿಯಲ್ ಎಸ್ಟೇಟ್). ಶಾಲೆ ಕಾಲೇಜುಗಳೂ ಇವೆ.
(ಪಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ